ಕ್ಯಾಲ್ವಿನ್, ಕೂಲಿಜ್	
	1872-1933. ಅಮೆರಿಕ ಸಂಯುಕ್ತ ಸಂಸ್ಥಾನದ 30ನೆಯ ಅಧ್ಯಕ್ಷ. ಈತ 1899ರಲ್ಲಿ ವಕೀಲಿ ವೃತ್ತಿಯಲ್ಲಿದ್ದಾಗಿನಿಂದಲೇ ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ವಹಿಸಿ ವಿವಿಧ ಸ್ಥಾನಗಳಿಗೆ ಆಯ್ಕೆಯಾಗಿದ್ದ.  1918-1919ರಲ್ಲಿ ಮ್ಯಾಸಚೂಸೆಟ್ಸ್ ರಾಜ್ಯದ ಗವರ್ನರ್ ಆಗಿ ಇವನ ಚುನಾವಣೆಯಾಯಿತು. ಆ ಸಂದರ್ಭದಲ್ಲಿ ಈತ ತೋರಿಸಿದ ದಕ್ಷತೆ ಸಾಮಥ್ರ್ಯಗಳಿಂದ ಪ್ರಸಿದ್ಧನಾದ.  ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದ. 1923ರ ಆಗಸ್ಟ್ 3 ರಂದು ಅಧ್ಯಕ್ಷ ಹಾರ್ಡಿಂಗ್ ಮೃತನಾದಾಗ ಕ್ಯಾಲ್ವಿನನಿಗೆ ಅಧ್ಯಕ್ಷಪದವಿ ಪ್ರಾಪ್ತವಾಯಿತು. 1924ರಲ್ಲಿ ಚುನಾಯಿತ ಅಧ್ಯಕ್ಷನಾಗಿ 1928ರ ವರೆಗೆ ಮುಂದುವರಿದ.  ಈತನ ಆಡಳಿತದ ಕಾಲದಲ್ಲಿ ಉಳಿತಾಯ ಸಾಧಿಸಲಾಯಿತು.  ಖಾಸಗಿ ಉದ್ಯಮಕ್ಕೆ ಪ್ರೋತ್ಸಾಹ ದೊರಕಿ ಕೈಗಾರಿಕೆ ಪ್ರಗತಿ ಹೊಂದಿತು.  ವಿದೇಶಾಂಗ ನೀತಿಯಲ್ಲಿ ತಾಟಸ್ಥ್ಯ ವಹಿಸುವುದು ಇವನ ಪ್ರಧಾನ ಧೋರಣೆಯಾಗಿತ್ತು.  ಆರ್ಥಿಕಾಭಿವೃದ್ಧಿಯೂ ತಕ್ಕಮಟ್ಟಿಗೆ ಸಾಧಿಸಿತು.       									(ಜಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ